ವಿಷಯಕ್ಕೆ ಹೋಗಿ

ವೈಶಿಷ್ಟ್ಯವಾಗಿರುವುದು

ಮತ್ತೊಂದು ವಿಶೇಷ ದಾಖಲೆ ಸನಿಹದಲ್ಲಿದ್ದಾರೆ ಕಿಂಗ್ ಕೊಹ್ಲಿ!

ಕ್ರಿಕೆಟ್ ಲೋಕದ ಕಿಂಗ್ ಅಂತಲೇ ಕರೆಯಲ್ಪಡುತ್ತಿರುವ ವಿರಾಟ್ ಕೊಹ್ಲಿ ತನ್ನ ಹೆಸರಿನಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದ್ಯಾವುದೇ ಸರಣಿಯಿರಲಿ, ಪಂದ್ಯವಿರಲಿ; ಕೊಹ್ಲಿ ಹೆಸರಿನಲ್ಲಿ ಒಂದಿಲ್ಲೊಂದು ದಾಖಲೆಗಳು ನಿರ್ಮಾಣವಾಗುತ್ತಲೇಯಿವೆ. ಈಗ ಕೊಹ್ಲಿ ಮತ್ತೊಂದು ವಿಶೇಷ ದಾಖಲೆಗೆ ಬಹಳ ಸನಿಹದಲ್ಲಿದ್ದಾರೆ. ಕಳೆದ ವರ್ಷ ವಿಶ್ವಕಪ್ ವೇಳೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಕೊಹ್ಲಿ ಧೂಳೀಪಟಗೊಳಿಸಿದ್ದರು. ಏಕದಿನ ವಿಶ್ವಕಪ್ ನಲ್ಲಿ 50ನೇ ಶತಕ ಸಿಡಿಸಿದ್ದ ಕೊಹ್ಲಿ, ಸಚಿನ್ ಅವರ ಹೆಸರಿನಲ್ಲಿದ್ದ 49 ಏಕದಿನ ಶತಕಗಳ ದಾಖಲೆಯನ್ನು ಹಿಂದಿಕ್ಕಿದ್ದರು. ಇನ್ನು ಜನವರಿ 25ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಮತ್ತೊಂದು ದಾಖಲೆ ನಿರ್ಮಿಸಲು ಕೊಹ್ಲಿ ಮುಂದಾಗಿದ್ದಾರೆ. ಜನವರಿ 25ರಿಂದ ಭಾರತದಲ್ಲಿ ಇಂಗ್ಲೆಂಡ್ ಮತ್ತು ಆತಿಥೇಯ ಭಾರತದ ಮಧ್ಯೆ 5 ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಟೆಸ್ಟ್ ಸರಣಿಯ ವೇಳೆ ಕೊಹ್ಲಿಯೇನಾದ್ರೂ 152 ರನ್ ಬಾರಿಸಿದ್ರೆ ಟೆಸ್ಟ್ ವೃತ್ತಿ ಬದುಕಿನಲ್ಲಿ 9,000 ರನ್ ಮೈಲಿಗಲ್ಲು ಸ್ಥಾಪಿಸಿದ ಸಾಧನೆಗೆ ಕಿಂಗ್ ಕೊಹ್ಲಿ ಪಾತ್ರರಾಗಲಿದ್ದಾರೆ. ಸದ್ಯ 113 ಟೆಸ್ಟ್ ಪಂದ್ಯಗಳನ್ನಾಡಿರುವ ಕೊಹ್ಲಿ 30 ಅರ್ಧ ಶತಕ, 29 ಶತಕ ಮತ್ತು 7 ದ್ವಿಶತಕಗಳ ಸಹಿತ ಒಟ್ಟು 8,848 ರನ್ ಬಾರಿಸಿದ್ದಾರೆ. ಅಂದ್ಹಾಗೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗ...

ಒಂದು ಬಿನ್ನಹ

ನಾನು ಈ ಭೂಮಿಯ 

ಬೆಳಕು ಕಾಣುವ ಮುನ್ನ

ನಿನ್ನ ಗರ್ಭದೊಳಗಿದ್ದಾಗ

ನಿನ್ನ ಉಬ್ಬಿದ ಹೊಟ್ಟೆ ನೋಡುತ್ತಾ

'ಇದು ನನ್ನ ಮಗು' ಎಂದು

ನೀನೇ ಉಬ್ಬಿರಲಿಲ್ಲವೇ?

ನಾನೂ ನಿನ್ನ ಹಾಗೆ ಹೆಣ್ಣೆಂದು ತಿಳಿದಾಗ

ಕೊಲ್ಲುವ ಮಾತೇಕೆ ನನ್ನ ಅಮ್ಮಾ?


ಅಣ್ಣನಿಗೂ-ನನಗೂ ತುಸುವೇ ವ್ಯತ್ಯಾಸ;

ಒಂದೇ ಬಣ್ಣ, ಒಂದೇ ರಕ್ತ-ಮಾಂಸ..

ನಾವಿಬ್ಬರೂ ಹಂಚಿಕೊಂಡದ್ದು ನಿಮ್ಮಿಬ್ಬರಿಂದ


ಉಳಿಸಮ್ಮ ನನ್ನನ್ನು..

ನಾ ನಿನ್ನ ಹಾಗೆ ಬದುಕಿ ಬಾಳುವೆ

ನಿನ್ನ ಹೆಸರು ಉಳಿಸುವೆ

ಈ ಕ್ರೂರ ಸಮಾಜ ನಿನ್ನನ್ನು

ನಡೆಸಿದಂತೆ ನನ್ನನ್ನು ಮಾಡಬೇಡಮ್ಮ..


ನೆನಪು ಹೇಗಿರಬೇಕು ನಿನಗೆ..?

ತೊಟ್ಟಿಲಲ್ಲಿ ನೀನು ಮಗುವಾಗಿ ಮಲಗಿ

ತಟಪಟನೆ ಕಾಲು ಬಡಿಯುತ್ತಿದ್ದಾಗ..

ಉಬ್ಬುಹಲ್ಲಿನ, ಕೆಂಗಣ್ಣಿನ ಒಡೆಯನ ಕರಿಗೈಯಿ0ದ ನಿನ್ನ ಕೊರಳಿಗೆ

ಅರಶಿಣ ದಾರದಿಂದ ಮೂರು ಗಂಟು ಬಿದ್ದದ್ದು?


ನಿನಗೇನು ತಿಳಿಯಿತಾಗ?

ಆಸೆಗಳು, ಭಾವನೆಗಳೆಲ್ಲಿ ಅಡಗಿದ್ದವು?

ತಾಳ್ಮೆಯಿರಲಿಲ್ಲ ಯಾರಿಗೂ ಯಾಕೆ?

ನೇಸರನ ಆಗಮನದವರೆಗೆ

ಸೂರ್ಯಕಾಂತಿ ಅರಳುವವರೆಗೆ?


ನೆನಪಿದೆಯೇ ನಿನಗೆ..?

ನಿನ್ನ ಮದುವೆಗೆ ಅಜ್ಜಿ, ತಾತ

ನೀಡಿದ್ದ, ಕಣ್ಣೀರಿನಲ್ಲಿ ಒದ್ದೆ ಮುದ್ದೆಯಾಗಿದ್ದ ನೋಟುಗಳು...

ಅತ್ತು, ಬತ್ತಿ ಹೋಗಿ ಕೆಂಪಾಗಿದ್ದ ಅವರ ಕಂಗಳು?


ನನ್ನ ಅತ್ತಿಗೆ ತರುವ ಕಾಂಚಾಣ

ನಿನಗೆ ಬೇಡಮ್ಮ

ಬಳಸದಿರು ಅವಳಿಗಾಗಿ ಹತ್ತಾರು ಚಿಮಿಣಿ ದೀಪ ಉರಿಸಲು ಇಟ್ಟ ಸೀಮೆಎಣ್ಣೆ

ಅವಳು ನನ್ನ ತವರಿನಲ್ಲಿ ನೂರಾರು ಹಣತೆಗಳನ್ನು ಬೆಳಗುವಳು..

ಭರವಸೆ ನನಗಿದೆ


ಉತ್ತರಿಸುವೆಯಾ..?

ಅಪ್ಪ ಕೆಲ ತಿಂಗಳ ಹಿಂದೆ

ಈ ಲೋಕದ ನಂಟು ಮುಗಿಸಿ ಹೊರಟಾಗ..

ನೀನು ಹಣೆಬರಹ, ಕೈ, ಕತ್ತು, ಕಾಲ್ಬೆರಳು;

ಅಷ್ಟೇ ಏಕೆ ಹೃದಯವನ್ನೇ ಬೋಳಾಗಿಸಿ ಕುಳಿತಾಗ

ಎಲ್ಲಿ ಹೋದವು ನಿನ್ನಾಸೆ ಕನಸುಗಳು, ಭಾವನೆಗಳು..?

ಇನ್ನೂ ಇವೆಯಲ್ಲವೇ ನಿನ್ನೊಳಗೆ..?


ಸುಳ್ಳು ಹೇಳಬೇಡಮ್ಮ

ನಿನ್ನದೇ ಕರುಳ ಕುಡಿಯಲ್ಲಿ..

ನೀನೂ ಹೆಣ್ಣು

ನಿನಗೂ ಜೀವ-ಭಾವವಿದೆ.

ಒಪ್ಪಿಕೋ ಈ ವಾಸ್ತವವ

ಬೇಯುತ್ತಿರುವ ನಿನ್ನ ಮನದಂತೆ

ನನ್ನ ಜೀವ-ಭಾವ

ಮ್.. ಮ್... ಉಹೂಂ.. ಮ್..

ಕೊಲ್ಲಬೇಡಮ್ಮಾ.. ಅಮ್ಮಾ... ಪ್ಲೀಸ್..!


-ಲೋಲಾಕ್ಷಿ ಎಸ್. ಶಿಬಾಜೆ

ಕಾಮೆಂಟ್‌ಗಳು

ಪ್ರಚಲಿತ ಪೋಸ್ಟ್‌ಗಳು